ದಿನಾಂಕ 28-12-2021 ರಂದು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಜಯನಗರದ ಜೈನ್(ಡೀಮ್ಡ್-ಟು-ಬಿ ಯುನಿವರ್ಸಿಟಿ)ಯ ಕನ್ನಡ ವಿಭಾಗವು "ಕನ್ನಡ ಕಾಯಕ ವರ್ಷಾಚರಣೆಯ" ಅಂಗವಾಗಿ “ಅಂತರ್ ಕಾಲೇಜು ಸಂವಾದ ಕಾರ್ಯಕ್ರಮ”ವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ.ಎಸ್ ನಾಗಾಭರಣ ಅವರು ಪಾಲ್ಗೊಂಡಿದ್ದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ "ಕನ್ನಡದ ಸೃಜನಶೀಲ ಅಭಿವ್ಯಕ್ತಿ, ಹುಟ್ಟುವ ಮಗುವಿಗೆ ಹೆಸರಿಡುವ ಮೂಲಕವೇ ಆರಂಭವಾಗುತ್ತದೆ, ತಂತ್ರಜ್ಞಾನ ಒಂದು ಭಾಷೆಗೆ ಪೂರಕವಾಗಿರಬೇಕೇ ವಿನಃ ಅದು ಮಾರಕವಾಗಿರಬಾರದು. ಕನ್ನಡ ಭಾಷೆ ಮೊದಲು ತನ್ನ ಅಸ್ಮಿತೆಯನ್ನುಳಿಸಿಕೊಳ್ಳಬೇಕಿದೆ.ನಂತರದಲ್ಲಿ ಅಭಿಮಾನದಿಂದ ತನ್ನನ್ನು ಪ್ರಕಟಗೊಳಿಸಿಕೊಳ್ಳುವ ಸಂದರ್ಭ ಎದುರಾಗಿದೆ. ಇಂದಿನ ಯುವ ಪೀಳಿಗೆ ಮುಂದಿನ ಕನ್ನಡದ ಭವಿಷ್ಯ ಮತ್ತು ಅದನ್ನು ಹೊರುವ ಜವಾಬ್ದಾರಿ ನಿಭಾಯಿಸ ಬೇಕಿದೆ. ಕನ್ನಡ ವಿಶ್ವಕ್ಕೇ ಅಭೂತಪೂರ್ವ ಸಂದೇಶಗಳನ್ನು ನೀಡಿದೆ. ಅದರ ವಿಶ್ವಾತ್ಮಕ ದೃಷ್ಟಿಕೋನವನ್ನು ಆದಿಕವಿ ಪಂಪ, ವಚನಕಾರರು, ಸಮಕಾಲೀನ ಕವಿಯಾಗಿದ್ದ ಕುವೆಂಪು ಮೊದಲಾದವರು ಜ್ಯಾತ್ಯಾತೀತ ಮತ್ತು ವಿಶ್ವ ಮಾನವ ಸಂದೇಶ ಸಾರುವ ನಿಲುವುಳ್ಳುಳ್ಳ ಸಾಲುಗಳನ್ನು ಸಾದರಪಡಿಸಿದರು ಎಂದರು. ಮುಂದು ವರೆದು ಮಾತನಾಡುತ್ತ ಇಡೀ ಭಾರತೀಯ ಭಾಷೆಗಳಲ್ಲಿ ಒಂದು ಕಾವ್ಯ ಕೃತಿಯನ್ನಿಟ್ಟುಕೊಂಡು ಒಂದು ಸಿನಿಮಾ ತಯಾರಾಗಿದ್ದರೆ ಅದು ಕನ್ನಡದಲ್ಲಿ ಮಾತ್ರ, ಇಂತಹ ಸೃಜನಶೀಲ ಕೆಲಸಗಳು ಹೆಚ್ಚು ಹೆಚ್ಚು ಆಗಬೇಕಿದೆ, ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿಯನ್ನು ಅದರ ಅಸ್ಮಿತೆಯನ್ನು ತಂತ್ರಜ್ಞಾನ ಬಳಕೆಯೊಂದಿಗೆ ಉಳಿಸಿಕೊಳ್ಳುವಲ್ಲಿ ಮುನ್ನಡೆಯ ಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಡಾ.ಎಂ ಎಸ್ ಆಶಾದೇವಿಯವರು "ಸರ್ಕಾರ ಕನ್ನಡ ಭಾಷೆಯ ಉಳಿವಿಗೆ ಬೆಳವಣಿಗೆಗೆ ಗಟ್ಟಿ ನಿಲುವು ತಾಳಬೇಕು,NEP ಕುರಿತು ಪರಿಹಾರಗಳು ಒದಗಿಸಬೇಕು ಅನ್ಯ ಭಾಷಿಕರ ಹಿತಕ್ಕಿಂತ ಅನ್ನ ನೀಡುವ ಭಾಷೆಯಾದ ಕನ್ನಡದ ಅಸ್ತಿತ್ವದ ವಿಷಯವಾಗಿ ಸರಿಯಾಗಿ ನಡೆದು ಕೊಳ್ಳ ಬೇಕು ಎಂದರು.
ಇ- ಕನ್ನಡ ಇ- ಯೋಜನಾಕಾರ್ಯದ ಮುಖ್ಯ ವ್ಯವಸ್ಥಾಪಕರಾದ ಶ್ರೀಮತಿ ಪುಷ್ಪ ಕನ್ನಡದಲ್ಲಿ ತಂತ್ರ ಜ್ಞಾನದ ಬಳಕೆಯ ಬಗೆಗೆ ವಿಷೇಶ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಡಾ.ದಿನೇಶ್ ನೀಲಕಂಠ್ ಕನ್ನಡ ಭಾಷೆಗಾಗಿ ಸರ್ಕಾರ ಕೈಗೊಳ್ಳುವ ನಿರ್ಣಯಗಳನ್ನು ಶ್ಲ್ಯಾಘಿಸಿದರು. ಸಮಕಾಲೀನ ಸಂದರ್ಭದಲ್ಲಿ ಓದುವ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಜೈನ್ ವಿಶ್ವ ವಿದ್ಯಾಲಯವು ಉನ್ನತ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಸದಾ ಸಿದ್ದಗೊಂಡಿದೆ ಎಂದರು.
ಶ್ರೀ.ರೋಹಿತ್ ಚಕ್ರತೀರ್ಥ ವಿದ್ಯಾರ್ಥಿಗಳೊಂದಿಗೆ ಆಧುನಿಕ ತಂತ್ರಜ್ಞಾನದಿಂದ ಕನ್ನಡ ವಿದ್ಯಾರ್ಥಿಗಳ ಓದಿನಲ್ಲಾದ ಬದಲಾವಣೆ ವಿಷಯದ ಮೇಲೆ ಸಂವಾದ ಕಾರ್ಯಕ್ರಮ ನಡೆಯಿಸಿ ಕೊಟ್ಟರು.
ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಜೇಶ್ವರಿ.ವೈ.ಎಂ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರೊ.ರಾಜಕುಮಾರ ಬಡಿಗೇರ ಅತಿಥಿಗಳನ್ನು ಪರಿಚಯಿಸಿದರು. ವೈಷ್ಣವಿ ಹಾಗೂ ನಿಮಿಷ ಸುನೀಲ ಕಾರ್ಯಕ್ರಮ ನಿರೂಪಿಸಿದರು. ಹರ್ಷಿಣಿ ವಂದಿಸಿದರು.ಕಾರ್ಯಕ್ರಮದಲ್ಲಿ ಪ್ರೊ. ಶ್ರೀಧರ ಮೂರ್ತಿ, ಡಾ.ರಜನಿ ಜಯರಾಮ, ಡಾ.ಅರವಿಂದ ಕುಮಾರ, ಡಾ.ಶೀಲಾದೇವಿ ಮಳಿಮಠ, ಡಾ.ಎಸ್ ಎಲ್ ಮಂಜುನಾಥ್, ಡಾ. ವತ್ಸಲ ಮೋಹನ್, ಡಾ.ಸಂದ್ಯಾ ಹೆಗಡೆ, ಡಾ.ಗೀತಾ ಮಧುಸೂದನ, ಡಾ.ಹೇಮಲತಾ ಬಿ.ಎಸ್ ಹಾಗೂ ವಿವಿಧ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.